ಅರಸೀಕೆರೆ : ಹಾಸನ ಜಿಲ್ಲೆಯ ಒಂದು ತಾಲ್ಲೂಕು, ಆ ತಾಲ್ಲೂಕಿನ ಮುಖ್ಯ
ಸ್ಥಳ. ತಾಲ್ಲೂಕನ್ನು ಕಡೂರು, ಚಿಕ್ಕನಾಯಕನಹಳ್ಳಿ, ತಿಪಟೂರು, ಚನ್ನರಾಯಪಟ್ಟಣ,
ಹಾಸನ, ಬೇಲೂರು ಮತ್ತು ಚಿಕ್ಕಮಗಳೂರು ತಾಲ್ಲೂಕುಗಳು ಸುತ್ತವರಿದಿವೆ. ಕಸಬ,
ಕಣಕಟ್ಟೆ, ಬಾಣಾವರ, ಜಾವಗಲ್ಲು, ಗಂಡಸಿ ಹೋಬಳಿಗಳಿವೆ. ಒಟ್ಟು 370 ಗ್ರಾಮಗಳೂ
ಅರಸೀಕೆರೆ ಮತ್ತು ಬಾಣಾವರ ಪಟ್ಟಣಗಳೂ ಇವೆ. ತಾಲ್ಲೂಕಿನ ವಿಸ್ತೀರ್ಣ 1278ಚ.ಕಿಮೀ.
ಜನಸಂಖ್ಯೆ 3,03,000. ಮೊದಲು ಹಾರ್ನಹಳ್ಳಿ ತಾಲ್ಲೂಕ್ಕಾಗಿದ್ದು 1882ರಲ್ಲಿ ಅರಸೀಕೆರೆ
ತಾಲ್ಲೂಕಾಯಿತು.

ಇದು ಬೆಟ್ಟಗುಡ್ಡಗಳ ಪ್ರದೇಶ. ಹಿರೇಕಲ್ಲುಬೆಟ್ಟ ಎಂಬುದು ಎತ್ತರವಾದ ಬೆಟ್ಟಗಳಲ್ಲೊಂದು.
ಈ ತಾಲ್ಲೂಕಿನ ದಕ್ಷಿಣಭಾಗದಲ್ಲಿ ಸಾಧಾರಣವಾದ ಅನೇಕ ಕುರುಚಲು ಕಾಡುಗಳೂ
ಹುಲ್ಲು ಬೆಳೆಯುವ ಪ್ರದೇಶಗಳೂ ಇವೆ. ಇಲ್ಲೆಲ್ಲ ಸಾಧಾರಣ ಫಲವತ್ತಾದ, ಗಡುಸಾದ
ಕೆಂಪು ಮತ್ತು ಬೂದುಬಣ್ಣದ ಮಣ್ಣಿದೆ.  ಭೂಮಿ ದಕ್ಷಿಣದಿಂದ ಉತ್ತರದ ಕಡೆಗೆ ಇಳಿಜಾರಾಗಿದೆ.
ಮಳೆ ಕಡಿಮೆ, ವಾರ್ಷಿಕ ಸರಾಸರಿ 671ಮಿಮೀ. ರಾಗಿ, ತೆಂಗು, ಮೆಣಸಿನಕಾಯಿ,
ಎಣ್ಣೆಕಾಳುಗಳು, ಜೋಳ ಮುಖ್ಯ ಬೆಳೆಗಳು. ಕೆರೆಗಳಿಂದ 1770, ಬಾವಿಗಳಿಂದ 820
ಮತ್ತು ಕೊಳವೆ ಬಾವಿಗಳಿಂದ 2800ಹೆ.ಗಳ ಜಮೀನು ನೀರಾವರಿಗೆ ಒಳಪಟ್ಟಿದೆ.
ದಕ್ಷಿಣಕ್ಕೆ ಅಮೃತಮಹಲ್ ಕಾವಲುಗಳು ಅನೇಕವಿದ್ದು ಇಲ್ಲಿ ಒಳ್ಳೆಯ ದನಕರುಗಳನ್ನು
ಸಾಕುತ್ತಾರೆ. ಕುರಿ ಸಾಕಣೆಯೂ ಹೆಚ್ಚು.

ಬಾಣಾವರ, ಗರುಡನಗಿರಿ, ಹಾರನಹಳ್ಳಿ,  ಹುಲ್ಲೆಕೆರೆ ಮತ್ತು ಜಾವಗಲ್ಲು ಈ ತಾಲ್ಲೂಕಿನ
ಪ್ರಸಿದ್ಧ ಸ್ಥಳಗಳು (ಆಯಾ ಲೇಖನಗಳನ್ನು ನೋಡಿ). ಅರಕೆರೆ ಎಂಬ ಗ್ರಾಮದಲ್ಲಿ
ಚನ್ನಕೇಶವ ಮತ್ತು ರಾಮೇಶ್ವರ ದೇವಾಲಯಗಳಿವೆ. ಇಲ್ಲಿ ಗಂಗದೊರೆ ಎರೆಯಪ್ಪನ
ಕಾಲಕ್ಕೆ ಸಂಬಂಧಿಸಿದ ಶಾಸನವಿರುವ ಒಂದು ದೊಡ್ಡ ವೀರಗಲ್ಲಿದೆ. ಕಂಚಿನಕೋವಿ
ಮರತಿ ಎಂಬುದು ಅರಸೀಕೆರೆ ಪಟ್ಟಣಕ್ಕೆ 4ಕಿಮೀ ದೂರದಲ್ಲಿರುವ ಒಂದು ಸಣ್ಣ ಬೆಟ್ಟ.
ಇಲ್ಲಿ ದೇವಾಲಯಗಳ ಅವಶೇಷಗಳಿವೆ. ಹಿಂದೆ ಇಲ್ಲೊಂದು ಊರಿದ್ದಿರಬಹುದೆಂದು
ಹೇಳುತ್ತಾರೆ. ಮಾಲೆಕಲ್ಲುತಿರುಪತಿ ಅರಸೀಕೆರೆಗೆÀ 3ಕಿಮೀ ದೂರದಲ್ಲಿರುವ ಒಂದು
ಯಾತ್ರಾಸ್ಥಳ. ಇಲ್ಲಿನ ಹಿರೇಕಲ್ಲು ಬೆಟ್ಟದ ಮೇಲಿರುವ ವೆಂಕಟರಮಣಸ್ವಾಮಿ ಮತ್ತು
ಬೆಟ್ಟದ ಬುಡದಲ್ಲಿರುವ ಗೋವಿಂದರಾಜಸ್ವಾಮಿ ದೇವಾಲಯಗಳು ಪ್ರಸಿದ್ಧವಾದವು.  ಮಾವತ್ತನ
ಹಳ್ಳಿಯಲ್ಲಿ ಹೊಯ್ಸಳ ಶೈಲಿಯ ಮಹಾಲಿಂಗೇಶ್ವರ ದೇವಾಲಯವಿದೆ. ಅಗ್ಗುಂದದಲ್ಲಿ
ಶಿಥಿಲವಾದ ಎರಡು ಹೊಯ್ಸಳ ದೇವಾಲಯಗಳಿವೆ. ಅರಸೀಕೆರೆಗೆ ಉತ್ತರದಲ್ಲಿ 11ಕಿಮೀ
ದೂರದಲ್ಲಿರುವ ನಾಗಪುರಿ ಕೋಟೆಯಲ್ಲಿ ಹೈದರ್ ಅಲಿ ಕಟ್ಟಿದ ಕೋಟೆಯ ಅವಶೇಷವಿದೆ.
ಅರಸೀಕೆರೆಗೆ 28ಕಿಮೀ ದೂರದಲ್ಲಿ ತಿಮ್ಮನಹಳ್ಳಿಯ ಹತಿರ ವೇದಾವತಿ ನದಿಗೆ ಹಿರೆಕಟ್ಟೆವಡ್ಡು
ಎನ್ನುವ ಕಟ್ಟೆ ಕಟ್ಟಲಾಗಿದೆ.

ತಾಲ್ಲೂಕಿನ ಕೇಂದ್ರ ಅರಸೀಕೆರೆಯ ಜನಸಂಖ್ಯೆ 45,160. ಮೈಸೂರು ಮತ್ತು
ಬೆಂಗಳೂರು ಕಡೆಗಳಿಂದ ಅರಸೀಕೆರೆಗೂ ಮುಂದಕ್ಕೂ ರೈಲು ಮಾರ್ಗಗಳಿವೆ. ಇದೊಂದು
ವ್ಯಾಪಾರ ಕೇಂದ್ರ. ಪ್ರತಿ ಶುಕ್ರವಾರ ಇಲ್ಲಿ ನಡೆಯುವ ದೊಡ್ಡ ಸಂತೆ ತೆಂಗಿನಕಾಯಿ
ಮತ್ತು ಕೊಬ್ಬರಿ ವ್ಯಾಪಾರಕ್ಕೆ ಪ್ರಸಿದ್ಧವಾಗಿದೆ. 1882ರಷ್ಟು ಹಿಂದೆಯೇ ಅಸ್ತಿತ್ವಕ್ಕೆ ಬಂದ
ಇಲ್ಲಿನ ಪುರಸಭೆ ಹಳೆಯ ಪುರಸಭೆಗಳಲ್ಲೊಂದು. ಈ ಊರಿಗೆ ಸಮೀಪವಾಗಿ ಕಸ್ತೂರಬಾ
ಗ್ರಾಮವೆಂಬ ಒಂದು ಮಾದರಿ ಗ್ರಾಮ ಸ್ಥಾಪಿತವಾಗಿದೆ. ಇದನ್ನು ಶ್ರೀಮತಿ ಯಶೋಧರಾ
ದಾಸಪ್ಪ ಅವರು ಸ್ಥಾಪಿಸಿದರು.

ಈ ಊರು ಹೊಯ್ಸಲರ ಆರಂಭಕಾಲದಲ್ಲಿಯೆ ಹುಟ್ಟುಕೊಂಡಿತು. 11ನೆಯ ಶತಮಾನದ
ಕಡೆಯಲ್ಲಿ ಎರೆಯಂಗನ ಪಟ್ಟದರಸಿ ಮಹಾದೇವಿ ಕೆರೆಯನ್ನು ಕಟ್ಟಿಸಿದಂತೆ ಒಂದು
ಶಾಸನದಿಂದ ತಿಳಿದುಬರುವುದರಿಂದ ಈ ಅರಸಿಯ ಹೆಸರಿನಿಂದಲೇ ಅರಸೀಕೆರೆ ಎಂಬ
ಹೆಸರು ಈ ಊರಿಗೆ ಬಂದಿರಬಹುದು. ಮುಂದೆ ಇಮ್ಮಡಿ ಬಲ್ಲಾಳನ ಕಾಲದಲ್ಲಿ ಈ
ಊರು ಅಭ್ಯುದಯುದ ಪರಾಕಾಷ್ಠೆಯನ್ನು ಕಂಡಿತು. ಬಲ್ಲಾಳನ ಪೆರಿಯರಸಿ ಉಮಾದೇವಿಯ
ತವರಾಗಿದ್ದ ಈ ಊರು ಅವನ ಕಾಲದಲ್ಲಿ ಹೊಯ್ಸಳ ರಾಜ್ಯದ ‘ಭಂಡಾರವಾಡ’ ವಾಯಿತು.
ಇದಕ್ಕೆ ಜಯಗೊಂಡ ಬಲ್ಲಾಳಪುರ, ವೀರವಿಜಯ ಬಲ್ಲಾಳಪುರ ಎಂಬ ಹೆಸರುಗಳೂ
ಇದ್ದು ಶಾಸನಗಳಲ್ಲಿ ರಾಜಧಾನಿ ಅರಸಿಯಕೆರೆ ಎನ್ನಿಸಿಕೊಂಡಿದೆ.

ವೇದವಿದರಾದ ವಿಪ್ರರು, ವೀರರಾದ ಕಾಯ್ವಾಳುಗಳು, ಆಢ್ಯರಾದ ಪರದರು,
ಅಲಕಾಧೀಶ ಕುಬೇರರನ್ನೂ ಧಿಕ್ಕರಿಸುವ ವಾಣಿಜ್ಯರು, ಅಚಲವಾಕ್ಯರಾದ ಜನ, ವಿನೂತಾಕಾರ
ರಾದ ಕಾಂತಾಜನ, ಇಳೆಗೆ ಮಂಡನಪ್ರಾಯವಾದ ದೇವಾಗಾರ ಸಂದೋಹ, ಸಾಗರತೀರದಂತೆ
ಶೋಭಿಸುವ ತುಂಬುಕೆರೆಗಳು, ಫಲಭರಿತ ವನಗಳು, ಪುಷ್ಪಭರಿತ ತೋಟಗಳು, ಸುರವೃಕ್ಷದಂತಿರುವ ಮಾವು, ಸುರಲತೆಯಂತಿರುವ ತಾಂಬೂಲ, ತೆಂಗು, ಕೌಂಗುಗಳು, ಗಂಧಶಾಲೀ ಪರಿಮಳಗಳಿಂದ ಕೂಡಿ ಉದ್ಯತ್ ಪ್ರಜಾಪೂರಿತವಾದ ಈ ನಗರಿಯು ಸುತ್ತಲೂ ಬಳಸಿದ್ದ
ಕೋಟೆಯಿಂದ ಉರ್ವೀಮಂಡನವಾಯಿತೆಂದು ಇಲ್ಲಿನ ಹಲವಾರು ಶಾಸನಗಳನ್ನು
ರಚಿಸಿರುವ ದೇವಪಾರ್ಯ, ತ್ರಿವಿಕ್ರಮಪಂಡಿತ, ಶಾಂತಿನಾಥ ಮೊದಲಾದ ಕವಿಗಳು
ಹಾಡಿ ಹೊಗಳಿದ್ದಾರೆ.

ಪ್ರಸನ್ನ ಚೆನ್ನ ಕೇಶವ, ನಖರ ಜಿನಾಲಯ, ಸಹಸ್ರಕೂಟ ಚೈತ್ಯಾಲಯ, ಕೊಯ್ಲಾಳೇಶ್ವರ
ಜಗತೇಶ್ವರ, ಮೇಳೇಶ್ವರ, ಬ್ರಹ್ಮ, ಕತ್ತಮೇಶ್ವರ, ಬಲ್ಲೇಶ್ವರ, ಅರೆಯಶಂಕರದೇವ ಮುಂತಾದ
ಹಲವು ಗುಡಿಗೋಪುರಗಳನ್ನು ಅನೇಕ ರಾಜ್ಯಾಧಿಕಾರಿಗಳು ಹಾಗೂ ವಣಿಕ್ ಮತ್ತು
ವೃತ್ತಿಶ್ರೇಣಿಗಳು, ಸರಸ್ವತಿ ಗಣದಾಸಿ ಕೇತೋಜ, ಪುಲಿಗೆಯ ಏಚೋಜ, ಸಿಂಗೋಜ ಮುಂತಾದ ಬಿರುದ ರೂವಾರಿಗಳನ್ನು ನಿಯೋಜಿಸಿ ಕಟ್ಟಿಸಿದರೆಂದು ಹೊಯ್ಸಳ ಶಾಸನಗಳಿಂದ ತಿಳಿಯುತ್ತದೆ. ವಿದ್ಯೆಗೆ,  ಕಲೆಗೆ ಐಶ್ವರ್ಯಕ್ಕೆ ಹೆಸರಾಗಿದ್ದ ಈ ಊರು ತೆಂಕಣ ಅಯ್ಯಾವೊಳೆ
ಯಾಯಿತು. ಅಭಿನವ ದ್ವಾರಾವತಿಯಾಯಿತು. ಇಲ್ಲಿನ ಧರ್ಮಪ್ರತಿಪಾಲಕ ಶಕ್ತಿಯನ್ನು
ಕೇಳಿದ ಕಳಚೂರ್ಯರ ಸಚಿವ ರೇಚರಸ ಬಲ್ಲಾಳನನ್ನಾಶ್ರಯಿಸಿ ಸಹಸ್ರಕೂಟ ಚೈತ್ಯಾಲಯಕ್ಕೆ
ಸಹಸ್ರಕೂಟ ಜಿನಬಿಂಬವನ್ನು ಮಾಡಿಸಿಕೊಟ್ಟ.

ಆದರೆ ಇಷ್ಟು ಉನ್ನತಿಗೇರಿದ ಈ ಊರು ಹೊಯ್ಸಳ ರಾಜ್ಯದ ಅವನತಿಯೊಂದಿಗೆ
ಇಳಿಮುಖವಾಯಿತು. ಮುಂದೆ ಕ್ರಮವಾಗಿ ಚನ್ನ ಪಟ್ಟಣದ ಜಗದೇವರಾಯ, ತರೀಕೆರೆಯ
ತಿಮ್ಮಪ್ಪನಾಯಕ, ಇಕ್ಕೇರಿಯ ಶಿವಪ್ಪನಾಯಕ ಇವರ ಅಧೀನದಲ್ಲಿ ಒಂದು ಸಾಮಾನ್ಯ
ಊರಾಗಿದ್ದು ಕಡೆಯಲ್ಲಿ ಮೈಸೂರರಸರಿಗೆ ಸೇರಿತು. ಆದರೆ ಮರಾಠಿಗರ ದಾಳಿಗೆ ಬೆದರಿ
ಕಪ್ಪ ತೆತ್ತು ಸಾಕಾಗಿದ್ದ ಮೈಸೂರು ಕಪ್ಪದ ಹೊರೆ ತೀರುವವರೆಗೆ ಒತ್ತೆ ಇಟ್ಟ ಮೈಸೂರು
ರಾಜ್ಯದ ಭಾಗಗಳಲ್ಲಿ ಈ ಊರು ಸೇರಿತು. ಆಗ ಇದು ಸುಲಿಗೆಗೊಳಗಾಗಿ ಹಾಳುಹಳ್ಳಿಯಾಗಿ
ದಾರಿಹೋಕರನ್ನು ಸುಲಿಯುವ ದರೋಡೆಕಾರರಿಗೆ ಆಶ್ರಯಸ್ಥಾನವಾಯಿತು. 19ನೆಯ
ಶತಮಾನದ ಕೊನೆಯಲ್ಲಿ ಬೆಂಗಳೂರು- ಪುಣೆ ರೈಲುಮಾರ್ಗ ಹಾಕಿದಮೇಲೆ ಈ
ಊರು ಪುನಃ ಬೆಳೆಯಲಾರಂಭಿಸಿತು.

ಹೊಯ್ಸಳರ ಕಾಲದಲ್ಲಿ ನಿರ್ಮಿತವಾದ ದೇವಾಲಯಗಳು ಈಗ ಬಹುಮಟ್ಟಿಗೆ
ನಾಶವಾಗಿವೆ. ಆದರೆ ಬಹುಶಃ 2ನೆಯ ಬಲ್ಲಾಳ ಕಟ್ಟಿಸಿರಬಹುದಾದ ಈಶ್ವರದೇವಾಲಯ
ಉಳಿದಿದೆ. ಪುಟ್ಟಪುಟ್ಟ ಗರ್ಭಗೃಹ ಸುಕನಾಸಿ, ನವರಂಗ, ಮುಖಮಂಟಪಗಳು, ನಕ್ಷತ್ರಾಕಾರದಲ್ಲಿ
ವೈವಿಧ್ಯಮಯವಾಗಿ ಸುಂದರವಾಗಿರುವ ಹೊರವಿನ್ಯಾಸ,  ಅದೇ ವಿನ್ಯಾಸದಲ್ಲಿಯೇ ನೀಳವಾಗಿ
ಗರ್ಭಗೃಹದ ಮೇಲೆದ್ದಿರುವ ಲಾವಣ್ಯಮಯವಾದ ಗೋಪುರ, ಹೊರಗೂ ಒಳಗೂ
ಯಾವ ಭಾಗವನ್ನೂ ಬಿಡದಂತೆ ಚಾತುರ್ಯದಿಂದ ಕಡೆದು ತುಂಬಿಸಿದ್ದರೂ ಅತಿಯಾಯಿತು
ಎನ್ನಿಸಿದ ಶಿಲ್ಪಜಾಣ್ಮೆಯಿಂದ ಕೂಡಿರುವ ಈ ದೇವಾಲಯದ ಹೊರಗೋಡೆಯ ಮೇಲೆ
ಒಂದು ಸಾಲು ಮಾತ್ರ ಮೂರ್ತಿಶಿಲ್ಪವಿದೆ. ಹಲವಾರು ಮೂಲೆಗಳುಳ್ಳ ನಕ್ಷತ್ರಾಕಾರದ
ಮುಖಮಂಟಪಕ್ಕೆ ದೊಡ್ಡದಾದ ಒಂದೇ ಭುವನೇಶ್ವರಿಯಿದ್ದು ಅಪರೂಪವಾದ ರೀತಿಯಲ್ಲಿದೆ.
ನವರಂಗದ ಒಳಗೋಡೆಯ ಕಲಾತ್ಮಕವಾದ ಗೂಡುಗಳು, ಸುಂದರವಾಗಿ ಲಲಿತವಾಗಿ
ಕಡೆದಿರುವ ಕಂಬಗಳು, ಕುಸುರಿ ಕೆಲಸದ ಪರಾಕಾಷ್ಟೆಯನ್ನು ಮುಟ್ಟಿರುವ ಗರ್ಭಗೃಹದ
ಬಾಗಿಲು ಎಲ್ಲವೂ ಆಕರ್ಷಕವಾಗಿವೆ. ಈ ದೇವಾಲಯದ ಪಕ್ಕದಲ್ಲಿಯೇ ಇರುವ ಜೋಡಿ
ಗರ್ಭಗೃಹಗಳುಳ್ಳ ಸಾಮಾನ್ಯ ಶಿವಾಲಯವೊಂದು, ಸಹಸ್ರಕೂಟ ಬಸದಿಯೊಂದು ಈಗ
ಉಳಿದು ಬಂದಿರುವ ಆ ಕಾಲದ ಕಟ್ಟಡಗಳು.
(ಎಂ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ